Friday, February 14, 2020

ಶಂಕರನಾರಾಯಣನೇ ಸ್ವಾಮಿ..

ಕೋಳ್ಯೂರು ಶ್ರೀ ಮಹಾಗಣಪತಿ ಶಂಕರನಾರಾಯಣ ದೇವಸ್ಥಾನವು ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೋಳ್ಯೂರು ಗ್ರಾಮದಲ್ಲಿದೆ. ಮೂರು ಹೊತ್ತು ನಿತ್ಯ ಪೂಜೆ, ಧನುರ್ಮಾಸದ ೧೮-೧೯ನೇ ದಿನಗಳಂದು (ಜನವರಿ ಮೊದಲ ವಾರ) ಅದ್ದೂರಿಯಾಗಿ ಸಂಪನ್ನಗೊಳ್ಳುವ ವಾರ್ಷಿಕ ಮಂಡಲಪೂಜೆ ಜಾತ್ರಾ ಮಹೋತ್ಸವ, ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವಗಳಲ್ಲದೆ ವಿವಿಧ ಹಬ್ಬ-ಹರಿದಿನಗಳಂದು ವಿಶೇಷ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು; ಅನ್ನ ಸಂತರ್ಪಣೆ; ಭಜನೆ, ಯಕ್ಷಗಾನ, ತಾಳಮದ್ದಳೆಯೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಸದಾ ನಡೆಯುತ್ತಿರುತ್ತವೆ.

Facebook: https://www.facebook.com/Shree-shankaranarayana-temple-koliyoor-1625810011016451

ನನ್ನ ಅಜ್ಜಿ ಸದಾ ಗುನುಗುತ್ತಿದ್ದ "ಶ್ರೀ ದೇವರ"ನ್ನು ಭಜಿಸುವ ಈ ಕೆಳಗಿನ ಹಾಡು ಕಾಲಗರ್ಭದಲ್ಲಿ ಕಳೆದೇ ಹೋಯಿತೇನೋ ಎಂದುಕೊಂಡು ಬೇಸರಿಸಿದ್ದೆ. ಅದೃಷ್ಟವಶಾತ್, ಕೆಲವು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ನಡೆಯುವ ಭಜನೆಯ ಸಮಯದಲ್ಲಿ ಈ ಹಾಡು ಕೇಳಿ ಖುಷಿಪಟ್ಟೆ.

ಹಾಡಿನ ಪೂರ್ಣಪಾಠ

ಶಂಕರನಾರಾಯಣನೇ ಸ್ವಾಮಿ ಕಿಂಕರ ಪಾಲಿಪ ಶಿವನೇ ।
ಪಂಕಜ ನಯನನೇ,  ಶಂಕರಿ ಪ್ರಿಯನೇ ।।
ಮಂಕು ಮನುಜರ ಠಂಕೆಯ ಮುರಿಯುವ ।। ಶಂಕರ ।।

ನಂಬೀದಾ ಸುಜನರನು ಬಲು ಸಂಭ್ರಮದಿ ಪೊರೆವವನೇ ।
ಅಂಬುಧಿ ಶಯನನೇ, ಅಂಬಿಕೆ ರಮಣನೇ ।।
ನಂಬಿದ ಭಕ್ತರ ನಿರತವು ಪಾಲಿಪ ।। ೧ ।।

ಮಂದಾರೋದ್ಧರ ದೇವಾ ಸುರವೃಂದ ವಂದಿತ ಭಾವ ।
ನಂದಿ ವಾಹನನೇ, ನಂದನ ಕಂದನೇ ।।
ಇಂದು ನೀ ಎಮ್ಮನು ಚಂದದಿ ಸಲಹೈ ।। ೨ ।।

ಘನತಪವಾ ಗೈದಿರುವಾ ಮಹಾ ಮುನಿಗಳು ಕಾಣದ ಪದವಾ ।
ಅನುದಿನ ನಿನ್ನಯ ಭಜನೆಯೊಳಿರುವೆವು ।।
ಅನುಗೊಳಿಸೆಮ್ಮಯ ಮನದಿಷ್ಟಾರ್ಥವ ।। ೩ ।।

ಕೋಳ್ಯೂರಾ ಪುರವರದಿ ನೀ ಸ್ಥಿರವಾಗಿ ನೆಲೆಸಿರುವೆ ।
ವ್ಯಾಳ ವಿಭೂಷಣ ಕಾಳಿಯ ಮರ್ದನ  ।।
ಶ್ರೀಲೋಲನೆ ವರಶೂಲಿ ಸದಾಶಿವ ।। ೪ ।।

No comments:

Post a Comment

ಅಜ್ಜ ಹೇಳಿದ ಕಥೆಗಳು ೧ - ಧರ್ಮಸ್ಥಳದಿಂದ ಅಣ್ಣಪ್ಪನ ಅಪಹರಣ!

ತಲೆತಲಾಂತರದಿಂದ ನೈಜ ಘಟನೆಗಳನ್ನು ಆಧರಿಸಿದ, ಹಿರಿಯರಿಂದ ಬಾಯಿಮಾತಿನ ಮೂಲಕ ಉಳಿದು ಬಂದ ಹಲವು ಕಥೆಗಳು ಧಾವಂತದ ಬದುಕಿನ ಈ ಕಾಲದಲ್ಲಿ ಕಳೆದು ಹೋಗುತ್ತಿವೆ. ಹೆಚ್ಚಾಗಿ ಅನ...