Saturday, February 29, 2020

ಅಜ್ಜ ಹೇಳಿದ ಕಥೆಗಳು ೧ - ಧರ್ಮಸ್ಥಳದಿಂದ ಅಣ್ಣಪ್ಪನ ಅಪಹರಣ!

ತಲೆತಲಾಂತರದಿಂದ ನೈಜ ಘಟನೆಗಳನ್ನು ಆಧರಿಸಿದ, ಹಿರಿಯರಿಂದ ಬಾಯಿಮಾತಿನ ಮೂಲಕ ಉಳಿದು ಬಂದ ಹಲವು ಕಥೆಗಳು ಧಾವಂತದ ಬದುಕಿನ ಈ ಕಾಲದಲ್ಲಿ ಕಳೆದು ಹೋಗುತ್ತಿವೆ. ಹೆಚ್ಚಾಗಿ ಅನಧಿಕೃತವಾದ ಇಂಥಾ ಕಥೆಗಳು ಎಂದೋ ನಡೆದ ಕೆಲವು ಕುತೂಹಲಕಾರಿ ಘಟನೆಗಳ ಬಗ್ಗೆ ತಿಳಿಸಿಕೊಡುತ್ತವೆ. ಕಾಲಾಂತರದಲ್ಲಿ ಕಥೆ ಹೇಳುವವರ ಕಲ್ಪನಾಶಕ್ತಿಯಿಂದ ಈ ಕಥೆಗಳಲ್ಲಿ ರಂಗು-ರಂಗಾದ ಹೊಸ ವಿಚಾರಗಳು ಸೇರಿ ನೈಜ ಘಟನೆಯಿಂದ ದೂರ ಸರಿದಿರುತ್ತವಾದರೂ, ಏನು ನಡೆದಿರಬಹುದು ಎಂದು ಊಹೆ ಮಾಡಲು ಮೆದುಳಿಗೆ ಸಾಕಷ್ಟು ಮೇವನ್ನು ಒದಗಿಸುತ್ತವೆ.

/*************/

ಅಂತಹವುಗಳಲ್ಲಿ ಒಂದು ಧರ್ಮಸ್ಥಳದಿಂದ ಅಣ್ಣಪ್ಪ ದೈವದ ಅಪಹರಣದ ಕಥೆ!

ಧರ್ಮಸ್ಥಳ ಕ್ಷೇತ್ರದ ಸ್ಥಳ ಪುರಾಣವನ್ನು ತಿಳಿದವರಿಗೆ ಇಲ್ಲಿ ಅಣ್ಣಪ್ಪ ದೈವದ ಮಹತ್ವ ತಿಳಿದೇ ಇರುತ್ತದೆ. ಭಗವಾನ್ ಪರಶಿವನು ಮಂಜುನಾಥ ಎಂಬ ಹೆಸರಿನಿಂದ ಇಲ್ಲಿ ಬಂದು ನೆಲೆಸುವಂತೆ ದೇವಾಲಯವನ್ನು ಕಟ್ಟಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಅಣ್ಣಪ್ಪ ಸ್ವಾಮಿ, ಕ್ಷೇತ್ರ ರಕ್ಷಣೆಯ ಹೊಣೆ ಹೊತ್ತು ಅಣ್ಣಪ್ಪ ಪಂಜುರ್ಲಿ ದೈವವಾಗಿ ಇಲ್ಲಿ ನೆಲೆಸಿದ್ದಾನೆ ಎಂಬುದಾಗಿ ಐತಿಹ್ಯವು ಸಾರುತ್ತದೆ. ಕ್ಷೇತ್ರದ ಯಾವುದೇ ಧಾರ್ಮಿಕ ವಿಧಿವಿಧಾನಗಳಲ್ಲಿ ಸ್ವಲ್ಪ ಲೋಪದೋಷ ಬಂದರೂ ಧರ್ಮಾಧಿಕಾರಿಗಳಿಗೆ ಅಣ್ಣಪ್ಪ ಕನಸಿನಲ್ಲಿ ಬಂದು ಎಚ್ಚರಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಅಂತಹ ಅಣ್ಣಪ್ಪ ದೈವವನ್ನೇ ಇಲ್ಲಿಂದ ಅಪಹರಿಸಿದರೆ ಇಲ್ಲಿನ ಅವಸ್ಥೆ ಏನಾದೀತು? ಇದು ಅಂತಹ ಒಂದು ಘಟನೆ! ಮುಂದೆ ಓದಿ...

ಹೆಗ್ಗಡೆ ಮನೆತನದವರು ಶ್ರೀ ಕ್ಷೇತ್ರದ ಪರಂಪರಾನುಗತ ಧರ್ಮಾಧಿಕಾರಿಗಳಾಗಿ ಕ್ಷೇತ್ರದ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುತ್ತಿದ್ದರು. ಹೀಗಿರಲು, ಮಂತ್ರ-ತಂತ್ರಗಳಲ್ಲಿ ಮಹಾ ಸಾಧಕರಾಗಿದ್ದ ಮುಳಿಯಾಲ ಕೃಷ್ಣ ಭಟ್ಟರು ಎಂಬೊಬ್ಬರು ಹೆಗ್ಗಡೆಯವರಿಗೆ ಆಪ್ತರಾಗಿದ್ದರು (ಯಾವ ಹೆಗ್ಗಡೆಯವರ ಕಾಲದಲ್ಲಿ ಎಂಬ ವಿವರ ತಿಳಿದಿಲ್ಲ), ಶ್ರೀ ಕ್ಷೇತ್ರದ ಆಡಳಿತ ವಿಚಾರಗಳಲ್ಲೂ ಹೆಗ್ಗಡೆಯವರಿಗೆ ಸಹಕರಿಸುತ್ತಿದ್ದರು.

ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದ ಕಾಲದಲ್ಲಿ ಯಾವುದೋ ಕಾರಣಕ್ಕೆ ಹೆಗ್ಗಡೆಯವರು ಹಾಗೂ ಕೃಷ್ಣ ಭಟ್ಟರ ನಡುವೆ ಭಿನ್ನಮತವುಂಟಾಯಿತು. ಭಿನ್ನಮತ ಕೈಮೀರಿ ವೈಮನಸ್ಸು ಬೆಳೆದು ತಾರಕಕ್ಕೇರಿ ಇನ್ನು ಜೊತೆಯಾಗಿರುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಯಿತು.

ಅಣ್ಣಪ್ಪ ದೈವದ ಉಪಸ್ಥಿತಿಯಲ್ಲಿ ಮಾತ್ರವೇ ಧರ್ಮಸ್ಥಳ ಕ್ಷೇತ್ರದ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯ ಎಂದು ಚೆನ್ನಾಗಿ ಅರಿತಿದ್ದ ಕೃಷ್ಣ ಭಟ್ಟರು, ಹೆಗ್ಗಡೆಯವರನ್ನು ಹಣಿಯಲು ಹೊಸ ಉಪಾಯವನ್ನು ಹೂಡಿದರು. ಇವರು ಮಂತ್ರ-ತಂತ್ರಗಳಲ್ಲಿ ಮಹಾ ಸಾಧಕರಾಗಿದ್ದಾರಷ್ಟೇ? ಇದನ್ನೇ ಉಪಯೋಗಿಸಿಕೊಂಡು ಅಣ್ಣಪ್ಪ ದೈವವನ್ನು ದಿಗ್ಬಂಧಿಸಿ ರಹಸ್ಯವಾಗಿ ಪಶ್ಚಿಮ ಘಟ್ಟವನ್ನು ಹತ್ತಿ ಧರ್ಮಸ್ಥಳದಿಂದ ದೂರ ಹೋಗಿಬಿಟ್ಟರು - ದಿಗ್ಬಂಧಿಸಲ್ಪಟ್ಟ ಅಣ್ಣಪ್ಪ ದೈವವನ್ನೂ ತನ್ನೊಡನೆ ಕರೆದುಕೊಂಡು!!

ಇತ್ತ, ಧರ್ಮಸ್ಥಳದಲ್ಲಿ ದೈನಂದಿನ ಕಾರ್ಯಗಳಲ್ಲಿ ಅಡಚಣೆಗಳು ಶುರುವಾದವು. ಯಾವುದೇ ಕೆಲಸವೂ ಸರಿಯಾಗಿ ಮುಂದೆ ಹೋಗದಂತಹಾ ಸ್ಥಿತಿಯುಂಟಾಯಿತು. ಹೆಗ್ಗಡೆಯವರು ಚಿಂತಾಕ್ರಾಂತರಾಗಿ, ಜೋಯಿಸರ ಮೊರೆ ಹೋದರು. ಪ್ರಶ್ನೆ ಇಡಲ್ಪಟ್ಟು,ಕ್ಷೇತ್ರದ ರಕ್ಷಕನಾದ ಅಣ್ಣಪ್ಪ ದೈವವೇ ಇಲ್ಲಿಲ್ಲ ಎಂಬ ಆಘಾತಕಾರಿ ವಿಷಯ ಬಹಿರಂಗವಾಯ್ತು. ದಿಗ್ಬಂಧನಕ್ಕೊಳಗಾಗಿ ಘಟ್ಟದ ಮೇಲೆ ಸಿಲುಕಿಕೊಂಡಿರುವ ಸೂಚನೆಯೂ ದೊರಕಿತು. (ಇನ್ನೊಂದು ಮೂಲದ ಪ್ರಕಾರ ಅಣ್ಣಪ್ಪ ದೈವವೇ ಹೆಗ್ಗಡೆಯವರ ಕನಸಿನಲ್ಲಿ ಬಂದು ತನ್ನ ಸ್ಥಿತಿಯನ್ನು ಹೇಳಿಕೊಂಡ ಎಂದಿದೆ)


(ಸಶೇಷ)



---------------------------------
ಉಲ್ಲೇಖಗಳು (ಬಾಹ್ಯ ಕೊಂಡಿಗಳು External links):


ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಐತಿಹ್ಯ: https://www.shridharmasthala.org/history
ಯಕ್ಷಗಾನ: https://www.youtube.com/playlist?list=PLe0QJAL49mJKqAyM-3RdpFoRlvKac6REj
ಚಲನಚಿತ್ರ: https://www.youtube.com/watch?v=948VmGm8Gig

No comments:

Post a Comment

ಅಜ್ಜ ಹೇಳಿದ ಕಥೆಗಳು ೧ - ಧರ್ಮಸ್ಥಳದಿಂದ ಅಣ್ಣಪ್ಪನ ಅಪಹರಣ!

ತಲೆತಲಾಂತರದಿಂದ ನೈಜ ಘಟನೆಗಳನ್ನು ಆಧರಿಸಿದ, ಹಿರಿಯರಿಂದ ಬಾಯಿಮಾತಿನ ಮೂಲಕ ಉಳಿದು ಬಂದ ಹಲವು ಕಥೆಗಳು ಧಾವಂತದ ಬದುಕಿನ ಈ ಕಾಲದಲ್ಲಿ ಕಳೆದು ಹೋಗುತ್ತಿವೆ. ಹೆಚ್ಚಾಗಿ ಅನ...