Saturday, February 29, 2020

ಅಜ್ಜ ಹೇಳಿದ ಕಥೆಗಳು ೧ - ಧರ್ಮಸ್ಥಳದಿಂದ ಅಣ್ಣಪ್ಪನ ಅಪಹರಣ!

ತಲೆತಲಾಂತರದಿಂದ ನೈಜ ಘಟನೆಗಳನ್ನು ಆಧರಿಸಿದ, ಹಿರಿಯರಿಂದ ಬಾಯಿಮಾತಿನ ಮೂಲಕ ಉಳಿದು ಬಂದ ಹಲವು ಕಥೆಗಳು ಧಾವಂತದ ಬದುಕಿನ ಈ ಕಾಲದಲ್ಲಿ ಕಳೆದು ಹೋಗುತ್ತಿವೆ. ಹೆಚ್ಚಾಗಿ ಅನಧಿಕೃತವಾದ ಇಂಥಾ ಕಥೆಗಳು ಎಂದೋ ನಡೆದ ಕೆಲವು ಕುತೂಹಲಕಾರಿ ಘಟನೆಗಳ ಬಗ್ಗೆ ತಿಳಿಸಿಕೊಡುತ್ತವೆ. ಕಾಲಾಂತರದಲ್ಲಿ ಕಥೆ ಹೇಳುವವರ ಕಲ್ಪನಾಶಕ್ತಿಯಿಂದ ಈ ಕಥೆಗಳಲ್ಲಿ ರಂಗು-ರಂಗಾದ ಹೊಸ ವಿಚಾರಗಳು ಸೇರಿ ನೈಜ ಘಟನೆಯಿಂದ ದೂರ ಸರಿದಿರುತ್ತವಾದರೂ, ಏನು ನಡೆದಿರಬಹುದು ಎಂದು ಊಹೆ ಮಾಡಲು ಮೆದುಳಿಗೆ ಸಾಕಷ್ಟು ಮೇವನ್ನು ಒದಗಿಸುತ್ತವೆ.

/*************/

ಅಂತಹವುಗಳಲ್ಲಿ ಒಂದು ಧರ್ಮಸ್ಥಳದಿಂದ ಅಣ್ಣಪ್ಪ ದೈವದ ಅಪಹರಣದ ಕಥೆ!

ಧರ್ಮಸ್ಥಳ ಕ್ಷೇತ್ರದ ಸ್ಥಳ ಪುರಾಣವನ್ನು ತಿಳಿದವರಿಗೆ ಇಲ್ಲಿ ಅಣ್ಣಪ್ಪ ದೈವದ ಮಹತ್ವ ತಿಳಿದೇ ಇರುತ್ತದೆ. ಭಗವಾನ್ ಪರಶಿವನು ಮಂಜುನಾಥ ಎಂಬ ಹೆಸರಿನಿಂದ ಇಲ್ಲಿ ಬಂದು ನೆಲೆಸುವಂತೆ ದೇವಾಲಯವನ್ನು ಕಟ್ಟಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಅಣ್ಣಪ್ಪ ಸ್ವಾಮಿ, ಕ್ಷೇತ್ರ ರಕ್ಷಣೆಯ ಹೊಣೆ ಹೊತ್ತು ಅಣ್ಣಪ್ಪ ಪಂಜುರ್ಲಿ ದೈವವಾಗಿ ಇಲ್ಲಿ ನೆಲೆಸಿದ್ದಾನೆ ಎಂಬುದಾಗಿ ಐತಿಹ್ಯವು ಸಾರುತ್ತದೆ. ಕ್ಷೇತ್ರದ ಯಾವುದೇ ಧಾರ್ಮಿಕ ವಿಧಿವಿಧಾನಗಳಲ್ಲಿ ಸ್ವಲ್ಪ ಲೋಪದೋಷ ಬಂದರೂ ಧರ್ಮಾಧಿಕಾರಿಗಳಿಗೆ ಅಣ್ಣಪ್ಪ ಕನಸಿನಲ್ಲಿ ಬಂದು ಎಚ್ಚರಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಅಂತಹ ಅಣ್ಣಪ್ಪ ದೈವವನ್ನೇ ಇಲ್ಲಿಂದ ಅಪಹರಿಸಿದರೆ ಇಲ್ಲಿನ ಅವಸ್ಥೆ ಏನಾದೀತು? ಇದು ಅಂತಹ ಒಂದು ಘಟನೆ! ಮುಂದೆ ಓದಿ...

ಹೆಗ್ಗಡೆ ಮನೆತನದವರು ಶ್ರೀ ಕ್ಷೇತ್ರದ ಪರಂಪರಾನುಗತ ಧರ್ಮಾಧಿಕಾರಿಗಳಾಗಿ ಕ್ಷೇತ್ರದ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುತ್ತಿದ್ದರು. ಹೀಗಿರಲು, ಮಂತ್ರ-ತಂತ್ರಗಳಲ್ಲಿ ಮಹಾ ಸಾಧಕರಾಗಿದ್ದ ಮುಳಿಯಾಲ ಕೃಷ್ಣ ಭಟ್ಟರು ಎಂಬೊಬ್ಬರು ಹೆಗ್ಗಡೆಯವರಿಗೆ ಆಪ್ತರಾಗಿದ್ದರು (ಯಾವ ಹೆಗ್ಗಡೆಯವರ ಕಾಲದಲ್ಲಿ ಎಂಬ ವಿವರ ತಿಳಿದಿಲ್ಲ), ಶ್ರೀ ಕ್ಷೇತ್ರದ ಆಡಳಿತ ವಿಚಾರಗಳಲ್ಲೂ ಹೆಗ್ಗಡೆಯವರಿಗೆ ಸಹಕರಿಸುತ್ತಿದ್ದರು.

ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದ ಕಾಲದಲ್ಲಿ ಯಾವುದೋ ಕಾರಣಕ್ಕೆ ಹೆಗ್ಗಡೆಯವರು ಹಾಗೂ ಕೃಷ್ಣ ಭಟ್ಟರ ನಡುವೆ ಭಿನ್ನಮತವುಂಟಾಯಿತು. ಭಿನ್ನಮತ ಕೈಮೀರಿ ವೈಮನಸ್ಸು ಬೆಳೆದು ತಾರಕಕ್ಕೇರಿ ಇನ್ನು ಜೊತೆಯಾಗಿರುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಯಿತು.

ಅಣ್ಣಪ್ಪ ದೈವದ ಉಪಸ್ಥಿತಿಯಲ್ಲಿ ಮಾತ್ರವೇ ಧರ್ಮಸ್ಥಳ ಕ್ಷೇತ್ರದ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯ ಎಂದು ಚೆನ್ನಾಗಿ ಅರಿತಿದ್ದ ಕೃಷ್ಣ ಭಟ್ಟರು, ಹೆಗ್ಗಡೆಯವರನ್ನು ಹಣಿಯಲು ಹೊಸ ಉಪಾಯವನ್ನು ಹೂಡಿದರು. ಇವರು ಮಂತ್ರ-ತಂತ್ರಗಳಲ್ಲಿ ಮಹಾ ಸಾಧಕರಾಗಿದ್ದಾರಷ್ಟೇ? ಇದನ್ನೇ ಉಪಯೋಗಿಸಿಕೊಂಡು ಅಣ್ಣಪ್ಪ ದೈವವನ್ನು ದಿಗ್ಬಂಧಿಸಿ ರಹಸ್ಯವಾಗಿ ಪಶ್ಚಿಮ ಘಟ್ಟವನ್ನು ಹತ್ತಿ ಧರ್ಮಸ್ಥಳದಿಂದ ದೂರ ಹೋಗಿಬಿಟ್ಟರು - ದಿಗ್ಬಂಧಿಸಲ್ಪಟ್ಟ ಅಣ್ಣಪ್ಪ ದೈವವನ್ನೂ ತನ್ನೊಡನೆ ಕರೆದುಕೊಂಡು!!

ಇತ್ತ, ಧರ್ಮಸ್ಥಳದಲ್ಲಿ ದೈನಂದಿನ ಕಾರ್ಯಗಳಲ್ಲಿ ಅಡಚಣೆಗಳು ಶುರುವಾದವು. ಯಾವುದೇ ಕೆಲಸವೂ ಸರಿಯಾಗಿ ಮುಂದೆ ಹೋಗದಂತಹಾ ಸ್ಥಿತಿಯುಂಟಾಯಿತು. ಹೆಗ್ಗಡೆಯವರು ಚಿಂತಾಕ್ರಾಂತರಾಗಿ, ಜೋಯಿಸರ ಮೊರೆ ಹೋದರು. ಪ್ರಶ್ನೆ ಇಡಲ್ಪಟ್ಟು,ಕ್ಷೇತ್ರದ ರಕ್ಷಕನಾದ ಅಣ್ಣಪ್ಪ ದೈವವೇ ಇಲ್ಲಿಲ್ಲ ಎಂಬ ಆಘಾತಕಾರಿ ವಿಷಯ ಬಹಿರಂಗವಾಯ್ತು. ದಿಗ್ಬಂಧನಕ್ಕೊಳಗಾಗಿ ಘಟ್ಟದ ಮೇಲೆ ಸಿಲುಕಿಕೊಂಡಿರುವ ಸೂಚನೆಯೂ ದೊರಕಿತು. (ಇನ್ನೊಂದು ಮೂಲದ ಪ್ರಕಾರ ಅಣ್ಣಪ್ಪ ದೈವವೇ ಹೆಗ್ಗಡೆಯವರ ಕನಸಿನಲ್ಲಿ ಬಂದು ತನ್ನ ಸ್ಥಿತಿಯನ್ನು ಹೇಳಿಕೊಂಡ ಎಂದಿದೆ)


(ಸಶೇಷ)



---------------------------------
ಉಲ್ಲೇಖಗಳು (ಬಾಹ್ಯ ಕೊಂಡಿಗಳು External links):


ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಐತಿಹ್ಯ: https://www.shridharmasthala.org/history
ಯಕ್ಷಗಾನ: https://www.youtube.com/playlist?list=PLe0QJAL49mJKqAyM-3RdpFoRlvKac6REj
ಚಲನಚಿತ್ರ: https://www.youtube.com/watch?v=948VmGm8Gig

Friday, February 14, 2020

ಶಂಕರನಾರಾಯಣನೇ ಸ್ವಾಮಿ..

ಕೋಳ್ಯೂರು ಶ್ರೀ ಮಹಾಗಣಪತಿ ಶಂಕರನಾರಾಯಣ ದೇವಸ್ಥಾನವು ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೋಳ್ಯೂರು ಗ್ರಾಮದಲ್ಲಿದೆ. ಮೂರು ಹೊತ್ತು ನಿತ್ಯ ಪೂಜೆ, ಧನುರ್ಮಾಸದ ೧೮-೧೯ನೇ ದಿನಗಳಂದು (ಜನವರಿ ಮೊದಲ ವಾರ) ಅದ್ದೂರಿಯಾಗಿ ಸಂಪನ್ನಗೊಳ್ಳುವ ವಾರ್ಷಿಕ ಮಂಡಲಪೂಜೆ ಜಾತ್ರಾ ಮಹೋತ್ಸವ, ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವಗಳಲ್ಲದೆ ವಿವಿಧ ಹಬ್ಬ-ಹರಿದಿನಗಳಂದು ವಿಶೇಷ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು; ಅನ್ನ ಸಂತರ್ಪಣೆ; ಭಜನೆ, ಯಕ್ಷಗಾನ, ತಾಳಮದ್ದಳೆಯೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಸದಾ ನಡೆಯುತ್ತಿರುತ್ತವೆ.

Facebook: https://www.facebook.com/Shree-shankaranarayana-temple-koliyoor-1625810011016451

ನನ್ನ ಅಜ್ಜಿ ಸದಾ ಗುನುಗುತ್ತಿದ್ದ "ಶ್ರೀ ದೇವರ"ನ್ನು ಭಜಿಸುವ ಈ ಕೆಳಗಿನ ಹಾಡು ಕಾಲಗರ್ಭದಲ್ಲಿ ಕಳೆದೇ ಹೋಯಿತೇನೋ ಎಂದುಕೊಂಡು ಬೇಸರಿಸಿದ್ದೆ. ಅದೃಷ್ಟವಶಾತ್, ಕೆಲವು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ನಡೆಯುವ ಭಜನೆಯ ಸಮಯದಲ್ಲಿ ಈ ಹಾಡು ಕೇಳಿ ಖುಷಿಪಟ್ಟೆ.

ಹಾಡಿನ ಪೂರ್ಣಪಾಠ

ಶಂಕರನಾರಾಯಣನೇ ಸ್ವಾಮಿ ಕಿಂಕರ ಪಾಲಿಪ ಶಿವನೇ ।
ಪಂಕಜ ನಯನನೇ,  ಶಂಕರಿ ಪ್ರಿಯನೇ ।।
ಮಂಕು ಮನುಜರ ಠಂಕೆಯ ಮುರಿಯುವ ।। ಶಂಕರ ।।

ನಂಬೀದಾ ಸುಜನರನು ಬಲು ಸಂಭ್ರಮದಿ ಪೊರೆವವನೇ ।
ಅಂಬುಧಿ ಶಯನನೇ, ಅಂಬಿಕೆ ರಮಣನೇ ।।
ನಂಬಿದ ಭಕ್ತರ ನಿರತವು ಪಾಲಿಪ ।। ೧ ।।

ಮಂದಾರೋದ್ಧರ ದೇವಾ ಸುರವೃಂದ ವಂದಿತ ಭಾವ ।
ನಂದಿ ವಾಹನನೇ, ನಂದನ ಕಂದನೇ ।।
ಇಂದು ನೀ ಎಮ್ಮನು ಚಂದದಿ ಸಲಹೈ ।। ೨ ।।

ಘನತಪವಾ ಗೈದಿರುವಾ ಮಹಾ ಮುನಿಗಳು ಕಾಣದ ಪದವಾ ।
ಅನುದಿನ ನಿನ್ನಯ ಭಜನೆಯೊಳಿರುವೆವು ।।
ಅನುಗೊಳಿಸೆಮ್ಮಯ ಮನದಿಷ್ಟಾರ್ಥವ ।। ೩ ।।

ಕೋಳ್ಯೂರಾ ಪುರವರದಿ ನೀ ಸ್ಥಿರವಾಗಿ ನೆಲೆಸಿರುವೆ ।
ವ್ಯಾಳ ವಿಭೂಷಣ ಕಾಳಿಯ ಮರ್ದನ  ।।
ಶ್ರೀಲೋಲನೆ ವರಶೂಲಿ ಸದಾಶಿವ ।। ೪ ।।

Thursday, February 13, 2020

ಜಗದ ಜನಕ ನಮಗೆ ಬೆಳಕ ತೋರು..

ನಮ್ಮ ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆಯಾಗಿ ಹಾಡುತ್ತಿದ್ದ "ಜಗದ ಜನಕ ನಮಗೆ ಬೆಳಕ ತೋರು.. " ಎಂಬ ಹಾಡನ್ನು ಕೆಲವು ತಿಂಗಳಿಂದೀಚೆಗೆ ಹುಡುಕುತ್ತಿದ್ದೆ. ಅಂತರ್ಜಾಲದಲ್ಲಿ ತಡಕಾಡಿ ನೋಡಿದಾಗ ಈ ಹಾಡಿನ ಪೂರ್ಣಪಾಠ ಎಲ್ಲಿಯೂ ಕಾಣಿಸಲಿಲ್ಲ. ಇತ್ತೀಚೆಗೆ ನಮ್ಮ ಶಾಲೆಯ ಅಧ್ಯಾಪಕರೊಬ್ಬರು ಸಿಕ್ಕಿದಾಗ ಇದರ ಬಗ್ಗೆ ಕೇಳಿದೆ. ಶಾಲೆಯಲ್ಲಿ ಈಗಲೂ ಇದುವೇ ಪ್ರಾರ್ಥನೆಯನ್ನು ಹಾಡುತ್ತಾರೆ ಎಂದು ತಿಳಿಸಿ, ಹಾಡಿನ ಪೂರ್ಣ ಪಾಠವನ್ನು ಕೊಟ್ಟಾಗ ಆದ ಸಂತೋಷಕ್ಕೆ ಪಾರವೇ ಇಲ್ಲ!! :)

ಹಾಡಿನ ಪೂರ್ಣಪಾಠ

ಜಗದ ಜನಕ ನಮಗೆ ಬೆಳಕ ತೋರು ಕರುಣಿಯೇ ।
ಭಕುತಿಯಿಂದ ಬೇಡುತಿಹೆವು ದಾರಿ ಕಾಣದೇ ।। ಜಗದ ।।

ಮತಿಗೆ ಕವಿದ ಮೋಹ ತಮವ ಕಳೆಯಲಾರೆಯಾ ।
ಹಿತದ ನಡೆಯ ನುಡಿಯ ಕಲಿವ ಪಥವ ತೋರೆಯಾ ।।

ಮನವ ಸೆಳೆವ ಮಾಯೆಯೊಳಗೆ ಎಮ್ಮ ಕೆಡಹದೆ ।
ಜನುಮ ಸಫಲವಾಗುವಂತೆ ನಡೆಸು ಕೆಡಿಸದೆ ।।

ಮನವು ಮಾತು ಕೃತಿಯು ನಮ್ಮದಿರಲಿ ನಿರ್ಮಲ ।
ವಿನಯಶೀಲ ನಿಯಮ ಕಲಿಸಿ ನೀಡು ಗುಣಫಲ ।। ಜಗದ ।।

Monday, June 28, 2010

ಕಾನಕಲ್ಲಟೆ - ತರಕಾರಿ


Some external references:

1. ಕಾನಕಲ್ಲಟೆ ಕಾಯಿಯ ರುಚಿಕರ ಅಡುಗೆಗಳು - http://deliciousindian.blogspot.com/2015/10/cayratia-mollissima.html

2. ಕಾನಕಲ್ಲಟೆ ಸವಿದಿದ್ದೀರಾ? - http://hasirumatu.blogspot.com/2018/09/blog-post_7.html

Thursday, June 24, 2010

ಸಾಗರಕೆ ಚಂದ್ರಮನ ಬೆರೆವಾಸೆ


ನನಗೆ ತುಂಬಾ ಇಷ್ಟವಾಗಿದ್ದ ಹಾಡಿದು. ಇದರ ಸಾಹಿತ್ಯ ಅಂತರ್ಜಾಲದಲ್ಲಿ ಬೇರೆಲ್ಲೂ ಸಿಗಲಿಲ್ಲ, ಆದ್ದರಿಂದ ಇಲ್ಲೇ ಬರೆದುಕೊಂಡೆ!

ಚಿತ್ರ : ಅವತಾರ ಪುರುಷ
ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ
ಸಂಗೀತ : ವಿಜಯ ಆನಂದ
ಗಾಯಕರು : ಎಸ್. ಪಿ ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ


ಸಾಗರಕೆ ಚಂದ್ರಮನ ಬೆರೆವಾಸೆ
ಚುಂಬನದ ಸಿಹಿಯಾಸೆ ||

ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆಹನಿಯಾಸೆ
ಜೀವಕೆ ಸ್ನೇಹದ ಆಸೆ
ಜೀವಕೆ ಸ್ನೇಹದ ಆಸೆ ||

ಒಲವಿನ ತೇರು ಏರುವ ಆಸೆ
ಬಳಿಗೆ ಬರಲಾರೆಯೇನು
ಬೆಡಗಿನದೇ ನೀ ಲಾವಣ್ಯ ಸಿರಿಯೇ
ಬಿಟ್ಟು ಇರಲಾರೆ ನಾನು
ಜೀವನ ಪಥದಿ ಜೊತೆಯಾದೆ ನೀನು
ಕತ್ತಲ ಬಾಳ ಬೆಳಕಾದ ಭಾನು
ಮಾತಿದು ಸುರ ವೀಣೆಯಂತೆ
ಪ್ರೀತಿಯು ಸ್ವರ ಮೇಳದಂತೆ || ಸಾಗರಕೆ ||

ಕಾಮನಬಿಲ್ಲ ಕಣ್ಣಲ್ಲಿ ಕಂಡೆ
ಕಲೆಯ ಸಾಕಾರ ನೀನು
ನೂತನ ಗಾನ ಬಾಳಲ್ಲಿ ಬರೆದ
ಸುಖದ ಸವಿಭಾವ ನೀನು
ಚಿಮ್ಮುವ ನಲ್ಮೆ ಹೊನಲಾಗಿ ಬಂದೆ
ಸ್ವರ್ಗದ ಸೊಬಗ ಧರೆಯಲ್ಲೇ ಕಂಡೆ
ಪ್ರೇಮವು ನಿಜಗಂಗೆಯಂತೆ
ಜೀವನ ಶ್ರುತಿಸೇರಿದಂತೆ || ಸಾಗರಕೆ ||

ಅಜ್ಜ ಹೇಳಿದ ಕಥೆಗಳು ೧ - ಧರ್ಮಸ್ಥಳದಿಂದ ಅಣ್ಣಪ್ಪನ ಅಪಹರಣ!

ತಲೆತಲಾಂತರದಿಂದ ನೈಜ ಘಟನೆಗಳನ್ನು ಆಧರಿಸಿದ, ಹಿರಿಯರಿಂದ ಬಾಯಿಮಾತಿನ ಮೂಲಕ ಉಳಿದು ಬಂದ ಹಲವು ಕಥೆಗಳು ಧಾವಂತದ ಬದುಕಿನ ಈ ಕಾಲದಲ್ಲಿ ಕಳೆದು ಹೋಗುತ್ತಿವೆ. ಹೆಚ್ಚಾಗಿ ಅನ...